ಚಿರತೆ
ಕಾರ್ನಿವೊರ ಗಣ ಅಲ್ಯುರಾಯ್ಡಿಯ ಉಪಗಣ ಫೀಲಿಡೀ ಕುಟುಂಬ-ಇವುಗಳಿಗೆ ಸೇರಿದ ಮಾಂಸಾಹಾರಿ ಸ್ತನಿ (ಲೇಪರ್ಡ್). ಇದನ್ನು ಕಿರುಬ, ಹೊನಿಗ, ಮೊಟಗ ಎಂದೂ ಕರೆಯುವುದುಂಟು. ಇದು ಏಷ್ಯ ಮತ್ತು ಆಫ್ರಿಕ ಖಂಡಗಳ ಬಹು ಭಾಗಗಳಲ್ಲಿ ಕಾಣದೊರೆಯುತ್ತದೆ. ದಟ್ಟವಾದ ಭಾರಿ ಕಾಡುಗಳಿಗಿಂತ ಹೆಚ್ಚಾಗಿ ಕುರುಚಲುಗಿಡಗಳ ಸಾಧಾರಣ ಕಾಡುಗಳಲ್ಲೂ ಬಂಡೆ ಅಥವಾ ಬಯಲುಗಳಿರುವ ಪ್ರದೇಶಗಳಲ್ಲೂ ವಾಸಿಸುತ್ತದೆ. ಇದು ನಿರಾಯಾಸವಾಗಿ ಮರವನ್ನು ಹತ್ತಬಲ್ಲುದು. ಚಂಗನೆ ಹಾರಿ ಗುರಿತಪ್ಪದಂತೆ ತನ್ನ ಬೇಟೆಯನ್ನು ಹಿಡಿದು ಕೊಂಡು ತಿನ್ನುವುದರಲ್ಲಿ ಅಸಾಮಾನ್ಯ ಕೌಶಲವನ್ನು ಪ್ರದರ್ಶಿಸುತ್ತದೆ. ಹಗಲು ವೇಳೆಗಳಲ್ಲಿ ಮೆಳೆಗಳ ಅಥವಾ ಬಂಡೆಗಳ ಸಂದುಗಳಲ್ಲೂ ಮರದ ಕೊಂಬೆಗಳ ಮೇಲೋ ಅಡಗಿದ್ದು ರಾತ್ರಿಯಾದ ಮೇಲೆ ಬೇಟೆಗೆ ಹೊರಡುತ್ತದೆ. ಇದರ ಹಳದಿ ಚರ್ಮದ ಮೇಲೆ ಕಪ್ಪು ಚುಕ್ಕೆಗಳಿರುವುದರಿಂದ ಮರ ಹತ್ತಿದಾಗ ಎಲೆಗಳ ನಡುವೆ ತೂರುವ ಬಿಸಿಲು-ನೆರಳುಗಳ ವಿನ್ಯಾಸಕ್ಕೆ ತನ್ನ ಮೈ ಬಣ್ಣವನ್ನು ಹೊಂದಿಸಿಕೊಳ್ಳುವುದರ ಮೂಲಕ ಸನ್ನಿವೇಶದಲ್ಲಿ ಬೆರೆತುಹೋಗಿ ಆತ್ಮರಕ್ಷಣೆ ಮಾಡಿಕೊಳ್ಳುತ್ತದೆ. ಮೈ ಚುಕ್ಕೆಗಳೇ ಇಲ್ಲದೆ ಪೂರ್ಣವಾಗಿ ಕಪ್ಪಾಗಿರುವ ಚಿರತೆಯೂ ಉಂಟು.
ಚಿರತೆ ಹುಲಿಗಿಂತಲೂ ಧೈರ್ಯಶಾಲಿ. ಕೆಲವು ವೇಳೆ ಸ್ವಲ್ಪವೂ ಹೆದರಿಕೆಯಿಲ್ಲದೆ ಜನ ವಾಸಿಸುವ ಕಡೆಗಳಲ್ಲೇ ವಾಸಿಸುತ್ತಿದ್ದು, ರಾತ್ರಿವೇಳೆ ಅವರ ದನ ಕರುಗಳ ಮೇಲೆ ಬಿದ್ದು ಕೊಂದು ತಿನ್ನುವುದು. ಇದು ಚಿಕ್ಕಪ್ರಾಣಿಯಾದರೂ ಬಲು ಚುರುಕು. ಇದರ ಇಂದ್ರಿಯಗಳು ಅತಿ ಪಟವಾಗಿರುವುದರಿಂದ ಸಣ್ಣಪುಟ್ಟಪ್ರಾಣಿಗಳನ್ನು ಹಿಡಿದು ತಿನ್ನುವಾಗ ತೀಕ್ಷ್ಣಬುದ್ಧಿಯಿಂದ ವರ್ತಿಸುತ್ತದೆ. ಹಕ್ಕಿಗಳು, ಉರಗಗಳು, ಮೊಲ, ಜಿಂಕೆಮರಿ, ನಳ್ಳಿ ಮುಂತಾದವು ಇದರ ಮುಖ್ಯ ಆಹಾರದ ಪ್ರಾಣಿಗಳು. ಕೆಲವು ವೇಳೆ ದನ, ಕುರಿ, ಜಿಂಕೆ, ಕುದುರೆ, ಕತ್ತೆ ಮುಂತಾದ ದೊಡ್ಡ ಪ್ರಾಣಿಗಳನ್ನೂ ಕೊಂದು ತಿನ್ನುವುದುಂಟು.
ಚಿರತೆ ವರ್ಷದ ಎಲ್ಲ ಕಾಲಗಳಲ್ಲೂ ಮರಿಹಾಕಬಹುದು. ಗರ್ಭಾವಸ್ಥೆಯ ಅವಧಿ ಸುಮಾರು ಹದಿಮೂರು ವಾರಗಳು, ಮರಿಗಳಿಗೆ ಎರಡೂವರೆ ವರ್ಷಗಳ ಸುಮಾರಿಗೆ ಪ್ರಬುದ್ಧತೆ ಬರುತ್ತದೆ.

ಚಿರತೆಗಳಲ್ಲಿ ಹಲವು ಬಗೆಗಳುಂಟು. ಪ್ಯಾಂತರ್ ಎಂಬುದು ಸಾಮಾನ್ಯ ಚಿರತೆ, ಹಿಮಕಿರುಬ ಎಂಬುದು ಮೈಮೇಲೆ ಚಿಕ್ಕ ಚಿಕ್ಕ ಚುಕ್ಕೆಗಳನ್ನುಳ್ಳ ಚಿಕ್ಕ ಚಿರತೆ. ಇವೆರಡೂ ಪ್ಯಾಂತೆರ ಜಾತಿಗೆ ಸೇರಿದವು. ಕ್ಲೌಡೆಡ್ ಲೆಪರ್ಡ್ ಎಂಬುದರ ಮೈ ಮೇಲೆ ಚುಕ್ಕೆಗಳು ಅಷ್ಟು ಚೆನ್ನಾಗಿ ಎದ್ದುಕಾಣುವುದಿಲ್ಲ ; ಇದು ನಿಯೋಫಿಲಿಸ್ ಜಾತಿಗೆ ಸೇರಿದ್ದು. ಬೇಟೆ ಚಿರತೆ (ಹಂಟಿಂಗ್ ಲೆಪರ್ಡ್) ಎಂಬುದು ಆಸಿನೋನಿಕ್ಸ್ ಜಾತಿಗೆ ಸೇರಿದ್ದು. ಇದನ್ನು ಸಾಕಿ ಪಳಗಿಸುವುದುಂಟು. ಪ್ಯಾಂತೆರ ಪಾರ್ಡಸ್ ಎಂಬ ಭಾರತೀಯ ಚಿರತೆಯ ಪ್ರಭೇದದಲ್ಲಿ ಮೂರು ಬಗೆಗಳಿವೆ. ಪ್ಯಾಂತೆರ ಪಾರ್ಡಸ್ ಫುಸ್ಕ, ಪ್ಯಾಂತೆರ ಪಾರ್ಡಸ್ ಪೆರ್ನಿಗ್ರ, ಪ್ಯಾಂತೆರ ಪಾರ್ಡಸ್ ಮಿಲರ್ಡ್ ಇವೇ ಆ ಮೂರು ಬಗೆಗಳು. ಪ್ಯಾಂತೆರ ಪಾರ್ಡಸ್ ಫುಸ್ಕ ಭಾರತದ ಅನೇಕ ಕಡೆಗಳಲ್ಲಿ ಕಾಡುಗಳಲ್ಲಿ ವಾಸಿಸುತ್ತದೆ ; ಇದರ ಹೊಳಪಾದ ಮೈ ಮೇಲೆ ಎದ್ದುಕಾಣುವ ಚಿಕ್ಕ ಚಿಕ್ಕ ಚುಕ್ಕೆಗಳಿವೆ. ಸಿಕ್ಕಿಂ, ನೇಪಾಳ, ಕುಮಾಂವ್, ಗರ್ವಾಲ್ ಮುಂತಾದೆಡೆಗಳಲ್ಲಿ ವಾಸಿಸುವ ಪ್ಯಾಂತೆರ ಪಾರ್ಡಸ್ ಪೆರ್ನಿಗ್ರ ಎಂಬ ಬಗೆಯ ಮೈ ಮೇಲೆ ಚಳಿಗಾಲದಲ್ಲಿ ದಟ್ಟವಾಗಿ ಕೂದಲು ಬೆಳೆದಿರುತ್ತದೆ. ಇದರ ಮೈ ಬಣ್ಣ ಅಷ್ಟು ಹೊಳಪಾಗಿಲ್ಲ; ಆದರೆ ಮಚ್ಚೆಗಳು ಅಗಲವಾಗಿವೆ. ಪ್ಯಾಂತೆರ ಪಾರ್ಡಸ್ ಮಿಲರ್ಡ್ ಎಂಬುದು ಕಾಶ್ಮೀರದಲ್ಲಿ ವಾಸಿಸುತ್ತದೆ; ಇದರ ಕೂದಲು ಅಷ್ಟು ಹೊಳಪಾಗಿಲ್ಲ; ಒತ್ತಾಗಿರುವ ಚಿಕ್ಕ ಚಿಕ್ಕ ಚುಕ್ಕೆಗಳಿರುತ್ತವೆ.
ಪ್ಯಾಂತೆರ ಊನ್ಸಿಯ ಎಂಬ ಪ್ರಭೇದ (ಹಿಮಗಿರುಬ) ಕಾಶ್ಮೀರದಿಂದ ಸಿಕ್ಕಿಂವರೆಗಿನ ಹಿಮಾಲಯ ಕಾಡುಗಳಲ್ಲಿ ವಾಸಿಸುತ್ತದೆ. ಇದು ಚಳಿಗಾಲದಲ್ಲಿ ಹಿಮಾಲಯದ ಕಡಿಮೆ ಎತ್ತರದ ಬೆಟ್ಟಗಳ ತಪ್ಪಲುಗಳಲ್ಲಿ ವಲಸೆ ಬರುತ್ತದೆ. ಮೈ ನಯವಾಗಿ ನರೀ ಬಣ್ಣವಾಗಿದ್ದು ಚುಕ್ಕೆಗಳು ಉದ್ದುದ್ದವಾದ ಮಚ್ಚೆಗಳಂತಿವೆ. ಇದರ ಚರ್ಮ ಮತ್ತು ತುಪ್ಪಳಕ್ಕೆ ತುಂಬ ಬೆಲೆಯಿರುವುದರಿಂದ ಈ ಚಿರತೆಯನ್ನು ಬೇಟೆಯಾಡುವುದು ಹೆಚ್ಚು.

ನಿಯೋಫಿಲಿಸ್ ನೆಬ್ಯುಲೋಸ (ಕ್ಲೌಡೆಡ್ ಲೆಪರ್ಡ್) ಎಂಬ ಚಿರತೆ ನೇಪಾಳ, ಭೂತಾನ, ಸಿಕ್ಕಿಂ, ಅಸ್ಸಾಂ ಮುಂತಾದ ಪ್ರದೇಶಗಳ ದಟ್ಟ ಕಾಡುಗಳಲ್ಲಿ ವಾಸಿಸುತ್ತದೆ. ಇದಕ್ಕೆ ಬಹು ನಿಡಿದಾದ ಕೋರೆಹಲ್ಲುಗಳಿವೆ. ಇದರ ಮೈ ಬಣ್ಣ ನರೆ, ಕಂದು ಇಲ್ಲವೆ ಮಾಸಲು ಬಿಳಿ, ಉದರಭಾಗ ಮಾತ್ರ ಬಿಳಿಬಣ್ಣದ್ದು. ಕಣ್ಣಿನಿಂದ ಬಾಯಿಯ ವರೆಗೂ ಎರಡು ಕಡೆಯಲ್ಲೂ ಇರುವ ಉದ್ದವಾದ ಕಪ್ಪು ಮಚ್ಚೆಗಳು ಇದರ ವಿಶಿಷ್ಟ ಲಕ್ಷಣಗಳು. ದೇಹದ ಇನ್ನುಳಿದ ಭಾಗಗಳಲ್ಲಿ ಒತ್ತಾದ ಕಪ್ಪು ಚುಕ್ಕೆಗಳಿರುತ್ತವೆ. ಇದು ಬಯಲಿಗೆ ಬಂದಾಗ ಬೇಟೆಗಾರರು ಹೊಂಚುಹಾಕಿ ಕೊಂದು ಹಾಕುವರು. ಇದನ್ನು ಸಾಕಿ ಪಳಗಿಸುವುದೂ ಉಂಟು. ಈಚೆಗೆ ಇದು ನಿರ್ವಂಶವಾಗುವ ಸ್ಥಿತಿಯಲ್ಲಿದೆ.

ಬೇಟೆಚಿರತೆ (ಹಂಟಿಂಗ್ ಲೆಪರ್ಡ್) ಎಂಬುದರ ಕಾಲುಗಳ ಉಗುರಿನ ಮೇಲೆ ಇತರ ಚಿರತೆಗಳಿಗಿರುವಂತೆ ಮಾಂಸದ ಪೊರೆಯಿಲ್ಲ. ಇದರಲ್ಲಿ ಭಾರತದ ಮತ್ತು ಆಫ್ರಿಕದ ಬೇಟೆ ಚಿರತೆಗಳೆಂದು ಎರಡು ಬಗೆಗಳುಂಟು. ಭಾರತದ ಬೇಟೆ ಚಿರತೆಗೆ ಆಫ್ರಿಕದ ಚಿರತೆಗಿರುವುದಕ್ಕಿಂತ ತೆಳುವಾದ ತುಪ್ಪಳದ ಚರ್ಮವಿದೆ. ಕತ್ತಿನ ಬಳಿ ಗಂಡು ಚಿರತೆಗೆ ಕೇಸರವಿಲ್ಲ. ಇದರ ಮೈ ಬಣ್ಣ ಮಾಸಲು ಬಿಳಿ. ಉದರಭಾಗ ಬಿಳಿ, ಕಣ್ಣಿನಿಂದ ಬಾಯಿಯವರಗೆ ಕಂದು ಮಚ್ಚೆಯಿದೆ. ಇದನ್ನು ಪಳಗಿಸಿ ಬೇಟೆಯಾಡಲು ಬಳಸುವರು.         								(ಎ;ಜೆ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ